Thursday, March 21, 2019

ಎಲ್ಲಾ ಕೆಲಸವನ್ನೂ ಒಬ್ಬರೇ ಮಾಡುವುದನ್ನು ರೂಢಿಸಿಕೊಳ್ಳುತ್ತಿದ್ದೇವೆ.
ಇತರರಿಗೆ ತೊಂದರೆ ಕೊಡಬಾರದು ಎಂಬ ಭಾವ ನಮ್ಮೆಲ್ಲರನ್ನೂ ಆವರಿಸಿಕೊಂಡಿದೆ.
ಸಮಸ್ಯೆ ಎಷ್ಟೇ ಸಣ್ಣದಾಗಿರಲೀ ಯಾರನ್ನಾದರೂ ಅವಲಂಬಿಸುವುದು ಕೊನೆಯ ಆಯ್ಕೆ ಎಂಬಂತಾಗಿದೆ.
ಇತರರ ಮುಂದೆ ಕೈಯೊಡ್ಡುವ ಸ್ಥಿತಿ ಬಾರದಿರಲೆಂದು ನಾವು ಗಾಣದೆತ್ತಿನಂತೆ ದುಡಿಯುತ್ತಿದ್ದೇವೆ.
ಮತ್ತೊಬ್ಬರಿಂದ ಲಿಫ್ಟ್ ಕೇಳುವ ಸಂಕೋಚದಿಂದ ಸ್ವಂತಕ್ಕೆ ಗಾಡಿ ಕೊಳ್ಳುವ ಧಾವಂತದಲ್ಲಿದ್ದೇವೆ.
ವೃದ್ಧಾಪ್ಯದಲ್ಲಿ ಮಕ್ಕಳಿಗೆ ಹೊರೆಯಾಗಬಾರದೆಂಬ ಕಾರಣಕ್ಕೆ ಪೋಷಕರು ಬ್ಯಾಂಕ್ ನ Fixed Deposit ಮೊರೆ ಹೋಗುತ್ತಿದ್ದಾರೆ.
ಪೋಷಕರಿಂದ ಖರ್ಚಿಗೆ ಹಣ ಕೇಳುವ ಮುಜುಗರದಿಂದಾಗಿ ಮಕ್ಕಳು ಹಣ ಕೂಡಿಡುತ್ತಿದ್ದಾರೆ.
ಆಪತ್ಕಾಲದಲ್ಲಿ ಹೆಂಡತಿ ಕೂಡಾ ತನ್ನನ್ನು ತೊರೆಯಬಹುದೆಂಬ ಗುಮಾನಿಯಿಂದಾಗಿ ಗಂಡ ರಹಸ್ಯವಾಗಿ ಮತ್ತೊಂದು ಬ್ಯಾಂಕ್ ಅಕೌಂಟ್ ಇಟ್ಟುಕೊಂಡಿದ್ದಾನೆ.
ಬೀದಿಪಾಲಾಗುವ ಸ್ಥಿತಿ ಬಂದರೆ ಏನು ಮಾಡುವುದೆಂಬ ಹೆದರಿಕೆಯಿಂದಾಗಿ ತವರಿನಿಂದ ಸಿಕ್ಕ ಪಾಲನ್ನೆಲ್ಲಾ ಹೆಂಡತಿ ತಾನೇ ಇಟ್ಟುಕೊಂಡಿದ್ದಾಳೆ.
ಮೇಜಿನ ಮೇಲೆ ಮಕ್ಕಳಿಗಾಗಿ ಅನ್ನ ಸಿದ್ಧವಾಗಿರಿಸಿ ಅಮ್ಮ ಬರಿಹೊಟ್ಟೆಯಲ್ಲೇ ಕೆಲಸಕ್ಕೆ ಓಡುತ್ತಿದ್ದಾಳೆ.
ಗಂಡ ಹೆಂಡತಿಯರ ಭೇಟಿ ರಜಾದಿನಗಳಿಗೆ ಮೀಸಲಾಗಿದೆ.
ಹೋಮ್ ನರ್ಸ್ ಗಳು, ಆಯಾಗಳು, ವೃದ್ಧಾಶ್ರಮಗಳು, ಎಲ್ಲವೂ ಪರರಿಂದ ಸಹಾಯ ಕೇಳುವ ನಮ್ಮ ಹಿಂಜರಿಕೆಯ ಫಲಶ್ರುತಿಗಳು.
ಮಕ್ಕಳ ಸಂಖ್ಯೆ ಕಡಿಮೆ ಮಾಡಿದ್ದೂ, ಫುಲ್ ಮೀಲ್ಸ್ ಗೆ ಬದಲಾಗಿ ಅನ್ನ ಸಾಂಬಾರ್ ತಿನ್ನುವುದನ್ನು ರೂಢಿಸಿಕೊಂಡದ್ದೂ ಸ್ವಾವಲಂಬನೆಯ ಉದ್ದೇಶದಿಂದಾಗಿಯೇ.
ಹಾಗೆ ಎಲ್ಲರೂ ಸ್ವಾವಲಂಬಿಗಳಾಗಲು ಕಾತರಿಸುತ್ತಿದ್ದೇವೆ. ಭವಿಷ್ಯದ ಬಗೆಗಿನ ಆತಂಕದಿಂದಾಗಿ ಧಾವಿಸುತ್ತಿದ್ದೇವೆ. ಹೆಚ್ಚು ಹೆಚ್ಚು ನ್ಯೂಕ್ಲಿಯರ್ ಆಗುತ್ತಿದ್ದೇವೆ.
ಕೈ ಒಡ್ಡುವುದನ್ನು, ಕನಿಕರದ ಮಾತುಗಳನ್ನು, ತಿರಸ್ಕಾರದ ನೋಟವನ್ನು ಮೀರುವ ಭೀಕರ ಸಮರದಲ್ಲಿ ತೊಡಗಿದ್ದೇವೆ.
ಸ್ವಾವಲಂಬಿಯಾಗುವ ಹಪಾಹಪಿಯಿಂದಾಗಿ ಹೆಚ್ಚಿನ ಹೊರೆ ಹೊರುವುದಕ್ಕೆ ಸಿದ್ಧರಾಗಿದ್ದೇವೆ. ದ್ವೀಪವಾಗುತ್ತಲೇ ಇದ್ದೇವೆ.

ಕುಸಿದು ಹೋದಾಗ ಯಾರೂ ಇರುವುದಿಲ್ಲ ಎಂಬ ಭಾವವನ್ನು ಗಟ್ಟಿಗೊಳಿಸುತ್ತಾ, ತನ್ನ ಸುತ್ತಣ ಜಗತ್ತನ್ನು ತನ್ನ ಪರಿಚಿತರನ್ನು ಅಪನಂಬಿಕೆಯಿಂದ ನೋಡುತ್ತಿದ್ದೇವೆ.
ಒಂಟಿಯಾಗಿಯೇ ನಗುತ್ತಿದ್ದೇವೆ, ಕಣ್ಣೀರು ಹಾಕುವುದೂ ಕೂಡಾ ಒಂಟಿಯಾಗಿಯೇ. ಒಟ್ಟಿಗೆ ನಗುವುದಕ್ಕೆ, ಮತ್ತೊಬ್ಬರ ತೋಳಿಗೆ ಆತುಕೊಂಡು ಅಳುವುದಕ್ಕೆ ಇಬ್ಬರಿಗೂ ಹಿಂಜರಿಕೆ. ಮತ್ತೊಬ್ಬರಿಗೆ ತೊಂದರೆಯಾಗಬಾರದಲ್ಲವೇ?
ಸವಿಗನಸು ಕಾಣುತ್ತಾ ನಿದ್ರಿಸುವುದಕ್ಕೆ ನಾಳಿನ Assignment ಗಳು ಬಿಡುತ್ತಿಲ್ಲ.
ಯಾರೂ ಮಾತಿಗೆ ಸಿಗುತ್ತಿಲ್ಲ. ನಮ್ಮಂತೆಯೇ ಇತರರೂ ಸ್ವಾವಲಂಬನೆಯ ಓಟದಲ್ಲಿ Busy ಯಾಗಿದ್ದಾರೆ.
ಎಲ್ಲರೂ ನಾಳೆಗಳನ್ನು ಗೆಲ್ಲುವ ಧಾವಂತದಲ್ಲಿದ್ದಾರೆ.
ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ WhatsApp ನಲ್ಲಿ, Online Group ಗಳಲ್ಲಿ, Social Media ಗಳಲ್ಲಿ ತಡಕಾಡುವುದು ಒಂದಷ್ಟು ಮಂದಿ ಒಟ್ಟಿಗೆ ಸಿಗುತ್ತಾರಲ್ಲಾ ಎಂಬ ಕಾತರದಿಂದ. ಒಟ್ಟಾಗಿ ಜಗಳ ಮಾಡುವ ಆಸೆಯಿಂದ.
ಜಗಳ ಮಾಡುವುದೂ ಕೂಡಾ ಮತ್ತೊಬ್ಬರೊಡನೆ ಒಂದಷ್ಟು ಹೊತ್ತು Spent ಮಾಡುವುದಕ್ಕಾಗಿ.
ಪ್ರೀತಿಸುವುದಕ್ಕೆ, ಪಕ್ಕೆಲುಬುಗಳು ಪುಡಿಪುಡಿಯಾಗುವಂತೆ ಆಲಂಗಿಸುವುದಕ್ಕೆ, ಚುಂಬಿಸುವುದಕ್ಕೆ, ಕೈ ಕೈ ಹಿಡಿದುಕೊಂಡು ಒಂದಷ್ಟು ದೂರ ನಡೆಯುವುದಕ್ಕೆ, ನಿರುಮ್ಮಳವಾಗಿ ನಗುವುದಕ್ಕೆ ಸ್ವಲ್ಪವೂ ಬಿಡುವಿಲ್ಲದಂತೆ ಜಗತ್ತೂ ಕೂಡಾ ನಮ್ಮೊಂದಿಗೇ ಓಡುತ್ತಲಿದೆ.
ಎಲ್ಲರೂ ಒಂದೊಂದು ದ್ವೀಪದಂತಾಗುವ ಸ್ಥಿತಿಯನ್ನು ನಾವಾಗಿಯೇ ಸೃಷ್ಟಿಸಿಕೊಂಡಿದ್ದೇವೆಯೇ?
ನಮಗೆ ಬೇಕಾಗಿರುವುದು ಸ್ವಯಂಪೂರ್ಣತೆಯೇ? ಸಹಬಾಳ್ವೆಯೇ?...

No comments:

Post a Comment