Wednesday, November 18, 2015

ನನ್ನ ಬಗ್ಗೆ ನಾನು.....

ನಾನು ಬ್ಲಾಗ್ ಬರೆಯಲು ಆರಂಭಿಸಿದ್ದೇನೆ. ಪ್ರೊಫೈಲ್ ನಲ್ಲಿ ಈಗಾಗಲೇ ಬರೆದಿರುವಂತೆ ಕಲೆ, ಸಿನೆಮಾ, ಓದು, ಬರವಣಿಗೆ, ಸಂಗೀತ, ರಾಜಕೀಯ ಮುಂತಾಗಿ ಬದುಕು ಮತ್ತು ಮನುಷ್ಯನಿಗೆ ಸಂಬಂಧಿಸಿದ್ದೆಲ್ಲವೂ ನನ್ನ ಆಸಕ್ತಿಯ ವಿಷಯಗಳು.

ಕಲಿತದ್ದು ಚಿತ್ರಕಲೆಯಾದರೂ ವಿಪರೀತ ಎಂಬಂತೆ ಹಚ್ಚಿಕೊಂಡಿದ್ದು ಸಾಹಿತ್ಯವನ್ನು. ಬರವಣಿಗೆಯಲ್ಲಿ ತೊಡಗುವ ಸಾಹಸ ಮಾಡಿಲ್ಲವಾದರೂ ಬಾಲ್ಯದಿಂದಲೇ ಓದು ನನ್ನ ಕೈ ಹಿಡಿದಿತ್ತು. ಮಕ್ಕಳ ಪಾಕ್ಷಿಕವಾಗಿದ್ದ "ಬಾಲಮಂಗಳ"ದಿಂದ ಆರಂಭವಾದ ಓದು "ರಿಚರ್ಡ್ ಡಾಕಿನ್ಸ್" ರ ಪುಸ್ತಕಗಳನ್ನು ಓದಿ ಅರಗಿಸಿಕೊಳ್ಳಲು ತಿಣುಕುವ ಹಂತದವರೆಗೆ ಮುಂದುವರೆದಿದೆ.

ಸಾಂಪ್ರದಾಯಿಕವಾಗಿ ಸಾಹಿತ್ಯದ ವಿದ್ಯಾರ್ಥಿಯಲ್ಲದ ನನಗೆ ಸುತ್ತಣ ಆಗು ಹೋಗುಗಳಿಗೆ ಅಕ್ಷರಗಳ ಮೂಲಕ ಸ್ಪಂದಿಸಬೇಕೆಂಬ ಹಂಬಲವಿದ್ದರೂ ಹೇಗೆ ಮತ್ತು ಎಷ್ಟು ಬರೆಯಬೇಕೆಂಬ ಗೊಂದಲದಲ್ಲೇ ವರ್ಷಗಳು ಉರುಳಿಹೋದವು. ಕೊನೆಗೆ ಗಟ್ಟಿ ಮನಸ್ಸು ಮಾಡಿ ಆದದ್ದಾಗಲೀ ಎಂದು ಬರವಣಿಗೆ ಆರಂಭಿಸಿದ್ದೇನೆ. ಈ ಬರಹಗಳು ನನಗೆ ನಾನೇ ಹಿಡಿದ ಕನ್ನಡಿಯೂ ಹೌದು.

No comments:

Post a Comment